ಬಾಲ್ಟಿಕ್ ಸಮುದ್ರ
ಉತ್ತರ ಆಕ್ಷಾಂಶ 540-660 ಮತ್ತು ಪೂರ್ವ ರೇಖಾಂಶ 900-300 ಇವುಗಳ ನಡುವೆ ವ್ಯಾಪಿಸಿರುವ ಮತ್ತು ಸ್ವೀಡನ್, ಡೆನ್ಮಾರ್ಕ್, ಜರ್ಮನಿ, ಫಿನ್‍ಲ್ಯಾಂಡ್, ಪೋಲ್ಯಾಂಡ್, ಸೋವಿಯತ್ ಸಮಾಜವಾದಿ ಗಣರಾಜ್ಯ ಮುಂತಾದ ದೇಶಗಳಿಂದ ಆವೃತವಾಗಿರುವ ಸಮುದ್ರ. ವಿಸ್ತೀರ್ಣ 4,14,400 ಚ.ಕಿಮೀ.

ಲೆನಿನ್‍ಗ್ರಾಡ್, ರೀಗ್, ಹೆಲ್ಸಿಂಕಿ, ಸ್ಟಾಕ್‍ಹೋಮ್, ಕೈಲ್, ಕೋಪನ್ ಹೇಗನ್ ಮತ್ತು ಸ್ಪೆಟಿನ್ ಇಲ್ಲಿಯ ಪ್ರಮುಖ ಬಂದರುಗಳು. ವರ್ಷದಲ್ಲಿ ನಾಲ್ಕಾರು ತಿಂಗಳುಗಳಷ್ಟು ಕಾಲ ನೀರು ಹೆಪ್ಪುಗಟ್ಟಿರುವುದರಿಂದ ಈ ಬಂದರುಗಳ ಉಪಯೋಗ ಕಡಿಮೆ ಎನ್ನಬಹುದು. ಮಂಜುಗಡ್ಡೆ ಕೊರೆಯುವ ಯಂತ್ರಗಳನ್ನು ಬಳಸಿ ಕೆಲವು ಹಡಗುಗಳು ಬಂದರನ್ನು ತಲಪುತ್ತವೆ. ವ್ಯಾಪಾರ ನಡೆಯುವುದು ಇಂಥ ಹಡಗುಗಳಿಂದಾಗಿ.

ಸಮುದ್ರದ ಆಳ ಕಡಿಮೆ ನೀರಿನಲ್ಲಿ ಉಪ್ಪಿನ ಅಂಶವೂ ಅಲ್ಪ. ರಷ್ಯಾದ ಒಂದು ಸರೋವರದ ನೀರು ಮತ್ತು ಕೆಲವು ನದಿಗಳ ನೀರು ಬಾಲ್ಟಿಕ್ ಸಮುದ್ರ ಸೇರುವುವು. ಮಳೆ ಕಡಿಮೆಯಾದರೆ ಸಮುದ್ರದ ಮಟ್ಟವೂ ಕಡಿಮೆ.

ಬಾತ್ನಿಯ, ಫಿನ್‍ಲೆಂಡ್, ರೀಗ್ ಇಲ್ಲಿಯ ಮೂರು ಮುಖ್ಯ ಕೊಲ್ಲಿಗಳು. ಸಮುದ್ರದಲ್ಲಿ ಅನೇಕ ದ್ವೀಪಗಳೂ ಮರಳು ದಂಡೆಗಳೂ ಇವೆ. ಗಾಳಿ, ಮಳೆಗಳ ರಭಸ ಹೆಚ್ಚು. ಇವುಗಳಿಂದಾಗಿ ಹಡಗುಗಳ ಸುಗಮ ಸಂಚಾರವಿಲ್ಲ. ಬಾಲ್ಟಿಕ್ ಸಮುದ್ರದಲ್ಲಿ ಜಲಚರಗಳು ಕಡಿಮೆ. ಉತ್ತರ ಸಮುದ್ರದಲ್ಲಿರುವುದರ ಹತ್ತನೇ ಒಂದಂಶ ಬಾಲ್ಟಿಕ್ ಸಮುದ್ರದಲ್ಲಿವೆ. ಜಲಚರಗಳ ಆಕಾರವೂ ಸಣ್ಣ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ